ಸಾಂದರ್ಭಿಕ ಚಿತ್ರ ( Bhoo Vandana 22 )
- ಹೆಚ್ಚು ಖರೀದಿ ಉತ್ತಮ ಜೀವನದ ಸಂಕೇತ ಎನ್ನುವ ಭ್ರಾಂತಿಯಲ್ಲಿ ಬದುಕುತ್ತಿದ್ದೇವೆ
- ನಮ್ಮ ಅತಿ ಕೊಳ್ಳುವಿಕೆಯ ಸ್ವಭಾವ ಪರಿಸರ ಹಾನಿ, ಸಂಪನ್ಮೂಲಗಳ ವಿನಾಶಕ್ಕೆ ಕಾರಣವಾಗಿದೆ
- ಹವಾಮಾನ ಬದಲಾವಣೆಗಳಂತಹ ಅನೇಕ ಗಂಭೀರ ಸವಾಲುಗಳನ್ನು ನಮ್ಮೆದುರಿಗೆ ತಂದು ನಿಲ್ಲಿಸುತ್ತಿವೆ
- ಜಾಗೃತ ಬಳಕೆ ಕುರಿತು ನಾವೆಲ್ಲರು ಎಚ್ಚರಾಗುವುದು ಇಂದಿನ ಪ್ರಮುಖ ಆದ್ಯತೆಯಾಗಬೇಕಿದೆ
Bhoo Vandana 22 : ನಮ್ಮದು ಕೊಳ್ಳುಬಾಕ ಜೀವನ. ಹೆಚ್ಚು ಖರೀದಿ ಉತ್ತಮ ಜೀವನದ ಸಂಕೇತ ಎನ್ನುವ ಭ್ರಾಂತಿಯಲ್ಲಿ ಬದುಕುತ್ತಿದ್ದೇವೆ. ಆದರೆ, ನಮ್ಮ ಅತಿ ಕೊಳ್ಳುವಿಕೆಯ ಸ್ವಭಾವ ಪರಿಸರ ಹಾನಿ, ಸಂಪನ್ಮೂಲಗಳ ವಿನಾಶ ಮತ್ತು ಹವಾಮಾನ ಬದಲಾವಣೆಗಳಂತಹ ಅನೇಕ ಗಂಭೀರ ಸವಾಲುಗಳನ್ನು ನಮ್ಮೆದುರಿಗೆ ತಂದು ನಿಲ್ಲಿಸುತ್ತಿವೆ ಎನ್ನುವುದರತ್ತ ನಾವು ಗಮನ ಹರಿಸಬೇಕಿದೆ. ನಮ್ಮ ಕೊಳ್ಳುಬಾಕ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳುವ ಸಮಯವದಾಗಲೇ ಬಂದಿರುವುದರಿಂದ 'ಜಾಗೃತ ಬಳಕೆ' (Conscious Consumption) ಕುರಿತು ಎಚ್ಚರಾಗುವುದು ಇಂದಿನ ಆದ್ಯತೆಯಾಗಬೇಕಿದೆ.
ಭಾರತೀಯ ಪರಂಪರೆ ಸುಸ್ಥಿರ ಅಭಿವೃದ್ಧಿಯನ್ನು ನಮಗೆ ಅಪರಿಗ್ರಹ ತತ್ವದ ಮೂಲಕ ನಮಗೆ ದರ್ಶಿಸುತ್ತದೆ. ಭಾರತೀಯ ತತ್ವಶಾಸ್ತ್ರವು ಮಾನವ ಜೀವನವನ್ನು ಕೇವಲ ಭೌತಿಕ ಪರಿಕರಗಳ ಮೂಲಕ ಮೌಲ್ಯಮಾಪನ ಮಾಡುವುದಿಲ್ಲ. ಅದು ಮಾನವನ ಆತ್ಮೋನ್ನತಿಯನ್ನು ಅಭಿವೃದ್ಧಿಯೆಂದು ಗಮನಿಸುವುದರಿಂದ “ಅಪರಿಗ್ರಹ” ತತ್ವದ ಪಾಲನೆ ಸ್ವಾಭಾವಿಕವಾಗಿಯೇ ಜೀವನ ಶೈಲಿಯಲ್ಲಿ ಅಡಕವಾಗಿತ್ತು. ‘ ಅತಿಯಾದ ಸಂಗ್ರಹ, ಆಸಕ್ತಿ, ಸ್ವಾರ್ಥಪೂರ್ಣ ಹಿಡಿತಗಳಿ೦ದ ಮುಕ್ತವಾಗಿರುವ ಮನೋಭಾವ. ಅಂದರೆ ಅಗತ್ಯವಿರುವಷ್ಟೇ ಸ್ವೀಕರಿಸಿ, ಉಳಿದುದನ್ನು ಸಮಾಜದ ಹಿತಕ್ಕಾಗಿ ಬಿಡುವ ಜೀವನಶೈಲಿ. ಪತಂಜಲಿ ಯೋಗ ಸೂತ್ರಗಳು ಯಮ-ನಿಯಮಗಳಲ್ಲಿ ಅಪರಿಗ್ರಹವನ್ನು ಪ್ರಮುಖ ನೈತಿಕ ನಿಯಮವಾಗಿ ಸೂಚಿಸುತ್ತವೆ. “ಅಪರಿಗ್ರಹಸ್ಥೈರ್ಯೇ ಜನ್ಮಕಥಂತಾಸಂಬೋಧಃ” ಎoಬ ಸೂತ್ರವು, ಅಪರಿಗ್ರಹವನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿಗೆ ನಿಮ೯ಲ ಆನಂದದ ಲಭ್ಯತೆಯ ಕುರಿತು ವಿವರಣೆ ನೀಡುತ್ತದೆ. ಭಗವದ್ಗೀತೆ ಕೂಡ ಯಾವುದೇ ವಸ್ತು ಅಥವಾ ವ್ಯಕ್ತಿಯತ್ತ ಹೆಚ್ಚಿನ ಲೋಭವನ್ನು ಹೊಂದದಿರಲು ಉಪದೇಶಿಸುತ್ತದೆ. ಜೈನ ಮತ್ತು ಬೌದ್ಧ ಧರ್ಮಗಳೂ ಅವಶ್ಯಕತೆಗಿಂತ ಹೆಚ್ಚು ಶೇಖರಿಸುವುದನ್ನು ಉಪದೇಶಿಸುತ್ತವೆ. ಮಹಾ "ಪ್ರಕೃತಿ ನಮ್ಮ ಅಗತ್ಯತೆಯನ್ನು ಪೂರೈಸಲು ಶಕ್ತವಾಗಿದೆ ಆದರೆ ದುರಾಸೆಯನ್ನಲ್ಲ" ಎಂದೆನ್ನುವ ಮಹಾತ್ಮ ಗಾಂಧಿಯವರ ಮಾತೂ ಇಲ್ಲಿ ನೆನೆಪಿಗೆ ಬರುತ್ತದೆ.
ಜಾಗೃತ ಬಳಕೆಯ ಮೊದಲ ಹೆಜ್ಜೆಯೆಂದರೆ ಖರೀದಿಯನ್ನು ಕಡಿತಗೊಳಿಸುವುದು. ಅಥವಾ ಅಗತ್ಯತೆಗಿಂತ ಹೆಚ್ಚು ಶೇಖರಿಸದಿರುವುದು. ಮಾರುಕಟ್ಟೆಯ ಘೋಷಣೆಗಳು ನಮಗೆ ಲಾಲಸೆಯನ್ನು ಹುಟ್ಟಿಸುವುದು ಸ್ವಾಭಾವಿಕ. ಉದಾಹರಣೆಗೆ 'ಬೈ ಟು ಗೆಟ್ ತ್ರೀ'. ಕಡಿಮೆ ಕ್ರಯಕ್ಕೇ ಆದರೂ, ನಮಗೆ ಮೂರು ಶರ್ಟ್ಗಳ ಅಗತ್ಯವಿದೆಯೇ! ಕೊಳ್ಳುವ ಮುನ್ನ ಯೋಚಿಸುವುದು ಉತ್ತಮ. ಅನಗತ್ಯವೆಂದಾದರೆ ಕೊಳ್ಳದಿರುವುದೇ ಉತ್ತಮ. ಒಂದು ವೇಳೆ ಕೊಳ್ಳುವುದೇ ಹೌದಾದರೆ, ನಮ್ಮ ಮನೆಯ ಸಹಾಯಕರಿಗೋ ಅಥವಾ ಅಗತ್ಯವೆನಿಸುವ ಇನ್ನಾರಿಗಾದರೂ ಅವರ ಅಳತೆಯಲ್ಲಿ ಕೊಳ್ಳಬಹುದೇ ಎಂದು ವಿಚಾರಿಸಿ ನಂತರ ಕೊಳ್ಳಬಹುದಲ್ಲವೇ? ಈಶಾವಾಸ್ಯೋಪನಿಷತ್ ನಮಗೆ “ಈಶಾವಾಸ್ಯಂ ಇದಂ ಸರ್ವಂ ಯತ್ ಕಿಂ ಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಂಜೀತಾ ಮಾ ಗೃಧಃ ಕಸ್ಯ-ಸ್ವಿತ್ ಧನಮ್" ತ್ಯಾಗದ ಮೂಲಕ ಅನುಭವಿಸು ಎಂಬ ಸಂದೇಶ ನೀಡುತ್ತದೆ. ಅಂದಹಾಗೆ ಇಲ್ಲಿ ‘ತ್ಯಾಗ’ ಎಂದರೆ ಸಂಪೂರ್ಣ ತ್ಯಜಿಸಿಯೆಂದೇನೂ ಹೇಳುತ್ತಿಲ್ಲ. ಲೋಕದಲ್ಲಿರುವ ಎಲ್ಲವೂ ನನಗೇ ಬೇಕು ಎನ್ನುವ ಹಕ್ಕಿನ ಭಾವದಿಂದ ಕಬಳಿಸುವುದಕ್ಕಿಂತ, ಅಗತ್ಯತೆಗಿಂತ ಹೆಚ್ಚಾಗಿ ಕೊಂಡರೂ, ಅಗತ್ಯವಿರುವ ಇನ್ನಾರಿಗೋ ಕೊಟ್ಟರೆ ಹೇಗೆ. ಇದನ್ನೂ ಅಪರಿಗ್ರಹಕ್ಕೆ ಸೇರಿಸಬಹುದೇ? ಯೋಚಿಸಬಹುದು.
ಮನೆಯಲ್ಲಿಯೂ ನಾವು ಜಾಗೃತ ಬಳಕೆಯನ್ನು ಪಾಲಿಸಬಹುದು. ನೀರು, ವಿದ್ಯುತ್ ಸಮರ್ಪಕ ಬಳಕೆಯೊಂದಿಗೆ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲೂ ಜಾಗೃತರಾಗುವುದು ಇಂದಿನ ಅಗತ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಸಂಸ್ಥೆ ಸುಸ್ಥಿರ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುತ್ತದೆ.
ಸುಸ್ಥಿರ ಅಭಿವೃದ್ದಿ ಗುರಿ -2030ರ ಪಟ್ಟಿಯಲ್ಲಿ 12ನೇ ಗುರಿಯಾಗಿರುವ ಜಾಗೃತ ಬಳಕೆ ಸಂಪೂಣ೯ವಾಗಿ ವೈಯುಕ್ತಿಕ ಸಿದ್ಧತೆ ಮತ್ತು ಮನಸ್ಥಿತಿ. ಹಾಗೆಂದು ಜೀವನ ವಿಮುಖತೆಯ ಭಾವವಿಲ್ಲಿ ಕಾಣುವುದಿಲ್ಲ. ಜಾಗೃತ ಬಳಕೆ ಸಮತೋಲನದ ಜೀವನದ ಮಾರ್ಗ. “ಕಡಿಮೆ ಖರೀದಿ ಮಾಡಿ, ಜವಾಬ್ದಾರಿಯಿಂದ ಬಳಸಿ, ಪರಿಸರ ಸ್ನೇಹಿ ಆಯ್ಕೆ ಮಾಡಿ” ಎಂಬ ಸರಳ ತತ್ವವನ್ನು ಅನುಸರಿಸುವ ವಿಧಾನ. ಈ ವಿಧಾನದ ಅಳವಡಿಕೆಯಿಂದ ವ್ಯಕ್ತಿಗತ ಜೀವನದಲ್ಲಿಯೂ, ಸಮಾಜದಲ್ಲಿಯೂ ಹಾಗೂ ಪ್ರಕೃತಿಯಲ್ಲಿಯೂ ಸಮತೋಲನ ಸಾಧಿಸಬಹುದು. ನಾವೆಲ್ಲರೂ ಜಾಗೃತ ಬಳಕೆಯನ್ನು ನಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿಸಿಕೊಂಡರೆ, ಪರಿಸರ ಸಂರಕ್ಷಣೆ ಮತ್ತು ಶಾಶ್ವತ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಮಹತ್ವದ ಹೆಜ್ಜೆ. ಅದು ವಿವೇಕಪೂರ್ಣ ಆಯ್ಕೆ. ಕಡಿಮೆ ಖರೀದಿ, ಸ್ಥಳೀಯರಿಗೆ ಬೆಂಬಲ, ಸ್ಥಿರ ಉತ್ಪನ್ನಗಳ ಬಳಕೆ ಮತ್ತು ಪರಿಸರ ಸ್ನೇಹಿ ಉದ್ಯಮಗಳಿಗೆ ಬೆಂಬಲ ನೀಡುವ ಮೂಲಕ ನಾವು ಪ್ರಕೃತಿಯೊoದಿಗೆ ಸಮನ್ವಯದ ಜೀವನವನ್ನು ನಿರ್ಮಿಸಬಹುದು. ಇದು ಇಂದಿನ ಅಗತ್ಯ ಮಾತ್ರವಲ್ಲ, ನಾಳಿನ ಪೀಳಿಗೆಯ ಮೇಲಿನ ನಮ್ಮ ಹೊಣೆಗಾರಿಕೆಯೂ ಹೌದು. ಜವಾಬ್ದಾರಿಯುತವಾಗಿರೋಣ.
ಲೇಖಕರ ಪರಿಚಯ
ಲೇಖಕರು ನಂದಿನಿ ಲಕ್ಷ್ಮೀಕಾಂತ್. ಆರೋಗ್ಯ ಸಂಶೋಧಕರು, ಬರಹಗಾರರು ಮತ್ತು ಸಂವಹನಕಾರರು. ICSSR ಇವರನ್ನು ಹಿರಿಯ ಸoಶೋಧಕಿಯೆಂದು ಗುರುತಿಸಿದೆ. ಶ್ರೀ ಚಿದಂಬರ ರಿಸಚ್೯ ಮತ್ತು ಡೆವಲಪ್ಮೆಂಟ್, ಗುಬ್ಬಿ, ಇದರ ಕಾಯ೯ನಿವಾ೯ಹಕರು. ರಚಯಿತಾ ಟ್ರಸ್ಟ್ನ ಸಂಸ್ಥಾಪಕರು.